ನೀರಿನ ಸರಬರಾಜು-
 	ಸಾರ್ವಜನಿಕರ ಆರೋಗ್ಯವನ್ನು ಲಕ್ಷ್ಯದಲ್ಲಿರಿಸಿಕೊಂಡು ಅವರ ಉಪಯೋಗಕ್ಕೆ ಸಾಕಾಗುವ ರೀತಿಯಲ್ಲಿ ಸುವ್ಯವಸ್ಥಿತವಾಗಿ ನೀರನ್ನು ಒದಗಿಸುವುದು. ಈ ಏರ್ಪಾಡಿನ ಚರಿತ್ರೆ ಮಾನವೇತಿಹಾಸದೊಡನೆ ನಿಕಟವಾಗಿ ಬೆರೆತುಹೋಗಿದೆ. ಸುಮಾರು 5,000 ವರ್ಷಗಳ ಹಿಂದೆ, ಸಿಂಧೂ ದೇಶದ ನಾಗರಿಕತೆಯಲ್ಲಿ, ಕುಡಿಯುವ ನೀರನ್ನು ದೊಡ್ಡದಾದ ಸರೋವರಗಳಲ್ಲಿ ಶೇಖರಿಸಿ ಕಾರಂಜಿಗಳಲ್ಲಿ ನಗರಗಳಿಗೆ ಒದಗಿಸುವ ಕಾರ್ಯಕ್ರಮವಿತ್ತು. ಔಶ್ರಿತ ಸಂಹಿತೆಯಲ್ಲಿಯೂ ಸುಶ್ರುತ ಸಂಹಿತೆಯಲ್ಲಿಯೂ ನೀರನ್ನು ಶುಭ್ರವಾಗಿ ಇಡಲು ವಿಧಾನಗಳನ್ನು ವಿವರಿಸಿದೆ ; ಸೂರ್ಯರಶ್ಮಿ ನೀರಿನ ಮೇಲೆ ಬೀಳಬೇಕು, ತಾಮ್ರದ ಸಲಾಕಿಗಳನ್ನು ಈ ನೀರಿನೊಳಗೆ ಅದ್ದಿಡಬೇಕು. ಇಂಥ ನಿರನ್ನು ಗೋಮೇಧಿಕ, ಸ್ಫಟಿಕ, ಚಿಲ್ಲದ ಬೀಜಗಳು ಮತ್ತು ಇದ್ದಲಿನ ಮೂಲಕ ಹರಿಸಿ ತಾಮ್ರದ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಶೇಖರಿಸಿ ಪರಿಶುದ್ಧಗೊಳಿಸಿ ಉಪಯೋಗಿಸಬೇಕು. ಈಜಿಪ್ಟಿನ ನೈಲ್ ನದೀ ಕಣಿವೆಯಲ್ಲಿಯ ಮಯೋರಿಸ್ ಪಟ್ಟಣದಲ್ಲಿ 4,000 ವರ್ಷಗಳ ಕೆಳಗೆ ಅಗಾಧವಾದ ಸರೋವರವನ್ನು ಕಟ್ಟಿ ಎರಡು ಕೋಟಿ ಪ್ರಜೆಗಳಿಗೆ ನೀರನ್ನು ಒದಗಿಸುವ ಸೌಕರ್ಯ ಇತ್ತು. ಭಾರತದ ಲಕ್ಷೋಪಲಕ್ಷ ಕೆರೆ, ಕುಂಟೆ, ತಟಾಕ, ಬಾವಿಗಳ ವಿವರಣೆ ಶಿಲಾಶಾಸನಗಳಲ್ಲಿ ಕಂಡುಬಂದಿದೆ. ಮಣ್ಣಿನ ಕೊಳಾಯಿಗಳು, ಸುಟ್ಟ ಕೊಳಾಯಿಗಳೂ ಮರದ ಕೊಳಾಯಿಗಳೂ ಇವೇ ಮೊದಲಾದ ಅಂತರ್ವಾಹಿನಿ ಪದ್ಧತಿಗೆ ಬೇಕಾದ ಸಲಕರಣೆಗಳು 2,500 ವರ್ಷಗಳಿಂದ ಜಾರಿಗೆ ಬಂದಿವೆ. ಈಜಿಪ್ಟ್, ಪರ್ಷಿಯಾ ಮತ್ತು ಯೂರೊಪ್ ದೇಶಗಳಲ್ಲಿಯೂ ಇವನ್ನು ಕಾಣಬಹುದು. ಕಬ್ಬಿಣದ ಕೊಳಾಯಿಯನ್ನು ವರ್ಸೆಲಸ್ ನಗರದಲ್ಲಿ 17ನೆಯ ಶತಮಾನದಲ್ಲಿ ಮೊದಲಿಗೆ ಉಪಯೋಗಿಸಲಾಯಿತು. ಮುಂದೆ ಕೈಗಾರಿಕೆ ಅಭಿವರ್ಧನೆಗೊಂಡು ಈ ನಿಟ್ಟಿನಲ್ಲಿ ಜ್ಞಾನ ಬೆಳೆಯಿತು. ಹಬೆ ಯಂತ್ರಗಳ ಮೂಲಕ ನೀರನ್ನು ಎತ್ತರದ ಮಟ್ಟಗಳಿಗೆ ರೇಚಿಸಿ ಸಾರ್ವಜನಿಕರಿಗೆ ಒದಗಿಸುವ ಪದ್ಧತಿ ಬಳಕೆಗೆ ಬಂತು. ನೀರನ್ನು ಶುದ್ಧೀಕರಿಸಿ ಕ್ಲೋರೀನ್, ಓಸೋóನ್ ಮೊದಲಾದ ಕ್ರಿಮಿನಾಶಕ ಅನಿಲಗಳನ್ನು ಉಪಯೋಗಿಸಿ, ಟೈಫಾಯಿಡ್, ಆಮಶಂಕೆ ಉದರಸಂಬಂಧ ಜಾಡ್ಯಗಳು ಮುಂತಾದವನ್ನು ನಿರ್ಮೂಲಗೊಳಿಸುವ ಮಟ್ಟದ ತಾಂತ್ರಿಕ ಉತ್ಕøಷ್ಟತೆಯನ್ನು ಕಳೆದ ಶತಮಾನದಲ್ಲಿಯೇ ಸಾಧಿಸಲಾಗಿತ್ತು. ಈಗ ಸರಬರಾಜಾಗುವ ನೀರಿನ ಮೊತ್ತ ಬಲುಮಟ್ಟಿಗೆ ಹೆಚ್ಚಾಗಿದೆ. ಬ್ರಿಟನ್ನಿನಲ್ಲಿ ಪ್ರತಿಯೊಂದು ಪಟ್ಟಣ ಮತ್ತು ಹಳ್ಳಿಯಲ್ಲೂ ತಲಾ 110-160 ಲೀಟರ್ ಸುರಕ್ಷಿತ ಮತ್ತು ಶುಭ್ರ ನೀರು 1954ರಿಂದ ಈಚೆಗೆ ದಿನವಹಿ ಸರಬರಾಜಾಗುತ್ತಿದೆ. ಅಮೆರಿಕದಲ್ಲಿ ಮೂರು ಜನರಿಗೆ ಒಂದು ಕೊಳಾಯಿಯಂತೆ ಇದೆ. ಬ್ರಿಟನ್ನಿನಲ್ಲಿ ನಾಲ್ಕು ಜನರಿಗೆ ಒಂದು.
ಈಚೆಗಿನ ವರ್ಷಗಳಲ್ಲಿ ಪ್ರಪಂಚಾದ್ಯಂತ ಮಳೆ ನೀರು ವ್ಯವಸಾಯಕ್ಕೂ ಉದ್ಯೋಗಕ್ಕೂ ನಗರ ನೈರ್ಮಲ್ಯಕ್ಕೂ ಕುಡಿಯುವುದಕ್ಕೂ ಸಾಕಾಗದೆ ನೀರನ್ನು ಹೇಗೆ ಸಂಗ್ರಹಿಸಬೇಕು ಎನ್ನುವುದೇ ಒಂದು ಸಮಸ್ಯೆಯಾಗಿದೆ. ಭೂಮ್ಯಂತರ್ಗತ ನೀರಿನ ಶೋಧನೆ, ಸಮುದ್ರದಿಂದ ನೀರನ್ನು ಕುದಿಸಿ ಆವಿಯನ್ನು ಹಿಡಿದು ನೀರಿನ ತಯಾರಿಕೆ ಮೊದಲಾದ ನೂತನ ಕ್ರಮಗಳು ಜಾರಿಗೆ ಬರುತ್ತಿವೆ.
 ಭಾರತದಲ್ಲಿ ಬ್ರಿಟಿಷರು ತಮ್ಮ ಸೈನ್ಯಗಳ ಉಪಯೋಗಕ್ಕಾಗಿ, ಕೆಲವು ಮುಖ್ಯ ಪಟ್ಟಣಗಳಲ್ಲಿ 19ನೆಯ ಶತಮಾನದಿಂದ ಸಾರ್ವಜನಿಕ ನೀರಿನ ಸರಬರಾಜು ಏರ್ಪಡಿಸಿದರು. ಆಗ ತಲಾ 45 ಲೀಟರಿನಷ್ಟು ನೀರೂ ಸಿಗುತ್ತಿರಲಿಲ್ಲ. ಅಲ್ಲಿಂದೀಚೆಗೆ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದ್ದರೂ ಲಕ್ಷೋಪಲಕ್ಷ ಹಳ್ಳಿಗಳಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಬಾವಿಯೂ ಅಲಭ್ಯವೇ. ಸಾವಿರಾರು ಸಣ್ಣ ಪಟ್ಟಣಗಳಲ್ಲಿ ನೀರಿನ ಸರಬರಾಜಿನ ಪದ್ಧತಿ ಇನ್ನು ಮೇಲೆ ಬರಬೇಕಾಗಿದೆ. ನೀರನ್ನು ಒದಗಿಸಿರುವ ನಗರಗಳಲ್ಲಿಯೂ 34-35 ಜನಕ್ಕೆ ಕೂಡ ಒಂದು ಕೊಳಾಯಿ ಇರುವಂತಿಲ್ಲ. ಪಾಶ್ಚಾತ್ಯ ದೇಶದಂತೆ ಇಲ್ಲಿ ಕೂಡ ನೀರು ಸರಬರಾಜು ಶುದ್ಧವಾಗಿ ಮತ್ತು ಯಥೇಚ್ಛವಾಗಿ ಇರಬೇಕು ; ಅಂದರೆ ಹತ್ತು ಮಂದಿಗೆ ಒಂದು ಕೊಳಾಯಿಯಾದರೂ ಅಗತ್ಯ. ಹೀಗಲ್ಲವಾದರೆ ಈಗ ನಾವು ವರ್ಷೇ ವರ್ಷೇ ಪತ್ರಿಕೆಗಳಲ್ಲಿ ಓದುತ್ತಿರುವಂತೆ ಕಾಲರ, ಟೈಫಾಯಿಡ್ ಮೊದಲಾದ ಜಾಡ್ಯಗಳಿಂದ ಜನನಾಶವಾಗುವುದು ಖಂಡಿತ. ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಈ ಜಾಡ್ಯಗಳ ಹೆಸರೇ ಕೇಳಿಬರದು.

 	ಸೌರಶಕ್ತಿಯ ಪರಿಣಾಮವಾಗಿ ನೀರು ವಿವಿಧ ತಾಣಗಳಿಂದ ಆವಿಯಾಗಿ ಮೇಲೇರಿ ಮೋಡವಾಗಿ ಮುಂದೆ ಮಳೆ ಹಾಗೂ ಹಿಮರೂಪದಲ್ಲಿ ಕೆಳಸುರಿದು ನೀರಿನ ಚಕ್ರ ಪೂರ್ತಿ ಆಗುವುದು. ನೀರು ಎರಡು ಬಗೆಗಳಲ್ಲಿ ಒದಗುತ್ತದೆ : ಭೂಮಿಯ ಮೇಲೆ ಸಿಗುವ ನದಿ, ಸರೋವರ, ಕೆರೆಗಳು; ಭೂಗರ್ಭದಲ್ಲಿರುವ ಊಟೆಗಳು, ಬಾವಿಗಳು, ಗಿರಿ ಪ್ರದೇಶದಲ್ಲಿ ಬಿದ್ದ ಮಳೆನೀರಿನ ಅರ್ಧಾಂಶ ಕೆಳಹರಿದು ಹೋಗುತ್ತದೆ. ಮೈದಾನಗಳಲ್ಲಿ ಈ ಮೊತ್ತ ಶೇ15-20ರ ವರೆಗೆ, ಮಿಕ್ಕ ನೀರು ಗಿಡಗಳಿಂದ ಹೀರಲ್ಪಟ್ಟು ಮತ್ತು ನೆಲದೊಳಕ್ಕೆ ಸೋರಿ ಇಂಗಿಹೋಗುವುದು. ಭೂಗತವಾದ ನೀರು ಅಲ್ಲಿರುವ ಸಾರವನ್ನು ಹೀರಿ ಕೆಲವು ಪ್ರದೇಶಗಳಲ್ಲಿ ಉಪ್ಪುನೀರಾಗಿಯೂ ಇನ್ನು ಕೆಲವೆಡೆಗಳಲ್ಲಿ ಸಿಹಿನೀರಾಗಿಯೂ ದೊರೆಯುವುದು. ಮಳೆಗಾಲದಲ್ಲಿ ಬಿದ್ದ ನೀರನ್ನು ಮನುಷ್ಯ ಭೂಮಿಯ ಮೇಲೆ ತಡೆಹಿಡಿದು ಸಂಗ್ರಹಿಸಿ ಬೇಸಗೆಯಲ್ಲಿ ಉಪಯೋಗಕ್ಕಾಗಿ ಬೇಕಾದೆಡೆಗೆ ಸಾಗಿಸುವನು. ಸಾಮಾನ್ಯವಾಗಿ ಶೇ.89-90ರಷ್ಟು ನೀರು ಈ ರೀತಿ ಸರಬರಾಜು ಆಗುವುದು. ಉಳಿದ ಅಂಶ ಬಾವಿಗಳ ಮುಖಾಂತರ ಮಾನವನ ಉಪಯೋಗಕ್ಕೆ ಒದಗುತ್ತದೆ. ಇದು ಹೆಚ್ಚು ದುರ್ಲಭ ಮತ್ತು ಎಲ್ಲ ಕಡೆಗಳಲ್ಲೂ ಸಾಕಾದಷ್ಟು ಸಿಗದು. ಬೇಸಗೆ ಕಾಲದಲ್ಲಂತೂ ಎಷ್ಟೊ ಕಡೆ ಒಣಗಿ ಹೋಗುವ ಪ್ರಮೇಯವೂ ಉಂಟು.
ನಗರಗಳಲ್ಲಿ ದಿನವಹಿ ತಲೆ ಒಂದಕ್ಕೆ ಒದಗಿಸಬೇಕಾದ ನೀರಿನ ಮೊತ್ತ ಹೀಗಿದೆ 
(ಲೀಟರುಗಳಲ್ಲಿ): 
ಅಡುಗೆಗೆ ... ... ...	3.5
ಕುಡಿಯಲು ... ... ...	2.25
ಮೀಯಲು ... ... ...	27.25
ವಸ್ತ್ರ, ಪಾತ್ರೆ ತೊಳೆಯಲು ... ... 	36.25
ವ್ಯಾಪಾರ, ಉದ್ಯೋಗ, ಕೈಗಾರಿಕೆ,
ಸಾರ್ವಜನಿಕ ಕಛೇರಿಗಳು, ಶಾಲೆ, 
ಕಾಲೇಜುಗಳು, ಆಸ್ಪತ್ರೆ ಮೊದಲಾದವುಗಳಿಗೆ ...	27.25
ಕೈಗೆ ಸಿಗದೆ ಮನೆಗಳಲ್ಲಿ ಪೋಲಾಗಿ ಹೋಗುವುದು ...	22.5
ಮನೆಗಳ ನೀರ್ವೊನಲು (ಫ್ಲಷ್) ಕಕ್ಕಸುಗಳ ಉಪಯೋಗಕ್ಕೆ	18

ಒಟ್ಟಿನಲ್ಲಿ ತಲೆಯೊಂದರ ದೈನಂದಿನ ನೀರಿನ ಅವಶ್ಯಕತೆ ಸುಮಾರು 135 ಲೀಟರುಗಳು. ಬೇಸಗೆಯಲ್ಲಿ ಇದರ ಒಂದೂಕಾಲ ಪಟ್ಟು ಬೇಕಾಗುವುದು. ಹಬ್ಬ ಹರಿದಿನ ಮದುವೆ ಮುಂಜಿಗಳಲ್ಲಿ ಇದು ಇನ್ನೂ ಜಾಸ್ತಿ ಆಗಬಹುದು. ಭಾರತ ಪರಿಸರ ಆರೋಗ್ಯ ಸಮಿತಿಯವರು ಬೆಂಗಳೂರಿನಂಥ ದೊಡ್ಡನಗರದಲ್ಲಿ ದೈನಂದಿನ ನೀರಿನ ಅವಶ್ಯಕತೆ ತಲಾ 200-225 ಲೀಟರುಗಳೆಂದು ಅಂದಾಜು ಮಾಡಿದ್ದಾರೆ.

ಐವತ್ತರಿಂದ ಅರವತ್ತು ಮನೆಗಳಿಗೆ ಒಂದು ಸಾರ್ವಜನಿಕ ಕೊಳಾಯಿ ಇದ್ದರೆ ಅಂಥ ಸರಬರಾಜಿಗೆ ದಿನವೊಂದರ ತಲ 32-36 ಲೀಟರ್ ನೀರು ವಿನಿಯೋಗವಾಗುವುದು. ಆದರೆ ಸರಬರಾಜಿನ ಉದ್ದೇಶ ಪ್ರತಿಮನೆಗೂ ಸರಾಸರಿಯಲ್ಲಿ 1-2 ಕೊಳಾಯಿಗಳಿದ್ದು ನೀರ್ವೊನಲು ಕಕ್ಕಸಿಗೂ ನೀರು ಸಿಗುವಂತಿರಬೇಕು. ಈ ರೀತಿ ನೀರು ಕೊಡಬೇಕಾದರೆ ತಲೆಯೊಂದಕ್ಕೆ ದಿನವೂ 90-115 ಲೀಟರ್ ನೀರು ಬೇಕು ಇದರ ಜೊತೆಗೆ ವ್ಯಾಪಾರ ಕೈಗಾರಿಕೆ ಮೊದಲಾದ ಕಾರ್ಯಕ್ಕೆ ನೀರು ಒದಗಿಸಿದ್ದಾದರೆ ಇದು 135 ಲೀಟರುಗಳವರೆಗೂ ಏರುವುದು. ಈಗ ನಮ್ಮ ನಗರದಲ್ಲಿ ಆಗುತ್ತಿರುವ ಪೂರೈಕೆ 55-60 ಲೀಟರ್ ಮಾತ್ರ.
ಸಾರ್ವಜನಿಕ ನೀರು ಸರಬರಾಜಿನ ಯೋಜನೆ : ನೀರಿನ ಸರಬರಾಜನ್ನು ಕೇವಲ ಒಂದು ಪಟ್ಟಣ ಅಥವಾ ಒಂದು ಗ್ರಾಮಕ್ಕೆ ಮಿತಗೊಳಿಸುವ ಬದಲು ಹಲವಾರು ಹಳ್ಳಿ ಪಟ್ಟಣಗಳ ಸಮುದಾಯಕ್ಕೆ ಮಾಡುವುದೇ ಆಧುನಿಕ ತಂತ್ರ. ಇದನ್ನು ಕಾರ್ಯರೂಪಕ್ಕೆ ಇಳಿಸಲು ಹಿರಿ ಜಲಾಶಯಗಳನ್ನು ಅವಲಂಬಿಸಬೇಕಾಗುವುದು. ಉದಾಹರಣೆಗೆ ಮ್ಯಾಂಚೆಸ್ಟರ್ ನಗರ 1960-61ರಿಂದ ಈಚೆಗೆ 160 ಕಿಮೀ ಫಾಸಲೆಯಿಂದ ನೀರನ್ನು ಸಂಗ್ರಹಿಸಿ ತನ್ನ ನಗರಸಭೆ ಒಂದಕ್ಕೆ ಅಲ್ಲದೆ 22 ಪುರಸಭೆ ಹಾಗೂ 20 ಕಂಪೆನಿಗಳಿಗೆ ಕೂಡ ಪೂರೈಸುತ್ತಿದೆ. ಅನೇಕ ಪಾಶ್ಚಾತ್ಯ ನಗರಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಬೆಂಗಳೂರಿಗೆ ಕಾವೇರಿ ನದಿಯಿಂದ ನೀರನ್ನು ಒದಗಿಸುವ ಯೋಜನೆ ಇದಕ್ಕೆ ಒಂದು ಉದಾಹರಣೆ.

ನೀರು ಸರಬರಾಜಿನ ಯೋಜನೆಯೊಂದು ಸಾಧಾರಣವಾಗಿ ಮುಂದಿನ 30 ವರ್ಷಗಳ ಬೆಳೆವಣಿಗೆಗೆ ಸಾಕಾಗುವಂತೆ ಪಾಶ್ಚಾತ್ಯ ದೇಶಗಳಲ್ಲಿ ರೂಪಿತವಾಗಿರುವುದು. ಆದಾಗ್ಯೂ ದೂರದಿಂದ ತರುವ ಮತ್ತು ದೊಡ್ಡ ಕಟ್ಟೆಗಳಿದ್ದು ದೊಡ್ಡ ವ್ಯಾಸವುಳ್ಳ ಕೊಳವೆಗಳ ಮೂಲಕ ತರುವ ನೀರಿನ ಯೋಜನೆ ಮುಂದಿನ 50 ವರ್ಷಗಳ ಬೆಳೆವಣಿಗೆಗೆ ಸಾಕಾಗುವಂತಿರಬೇಕು. ಭಾರತದಂಥ ಅಭಿವೃದ್ಧಿಶೀಲ ದೇಶಗಳಲ್ಲಿ ಯೋಜನೆಗಳನ್ನು ಪದೇಪದೇ ಬದಲಾವಣೆ ಮಾಡುವುದು ಆರ್ಥಿಕವಾಗಿ ದುಬಾರಿ ಆಗುವುದು. ದೀರ್ಘಕಾಲದ ಯೋಜನೆಗೆ ತಕ್ಕಂತೆ ಪ್ರಜಾಸಂಖ್ಯೆಯನ್ನು ಅಂದಾಜು ಮಾಡಬೇಕು ; ಮತ್ತು ಈ ಅವಧಿಯಲ್ಲಿ ಬರಬಹುದಾದ ನಗರವಿಸ್ತರಣೆಗಳು, ಉದ್ಯೋಗ ಕೈಗಾರಿಕೆ ಸ್ಥಾನಗಳು, ಜನಸಾಮಾನ್ಯರ ಜೀವನ ಬೆಳೆಯುವ ದರ ಮೊದಲಾದವನ್ನು ಅನುಲಕ್ಷಿಸಿ ಹೆಚ್ಚಿಗೆ ನೀರಿನ ಸೌಕರ್ಯವನ್ನು ಏರ್ಪಡಿಸಬೇಕು. ಇದಕ್ಕೆ ತಕ್ಕಂತೆ ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್) ತಯಾರಾಗಬೇಕು.
ಜೀವನದಿಗಳಿಂದ ನೀರನ್ನು ಒದಗಿಸುವುದಾದರೆ ಅದು ಬೇಸಗೆಯ ಅತ್ಯಂತ ಕಡು ದಿನಗಳಲ್ಲಿಯೂ ಸಾಕಾಗುವ ಮೊತ್ತದಲ್ಲಿ ಪೂರೈಕೆ ಆಗಬೇಕು. ಎಂದರೆ ಆ ದಿನಗಳಂದು ಸಾಮಾನ್ಯ ದಿನಗಳ ಒಂದೂವರೆ ಪಾಲು ಸಿಕ್ಕಬೇಕು. ನೀರಿನ ಸರೋವರ ಅಥವಾ ಸಣ್ಣ ನದಿಗಳಿಂದ ಶೇಖರಿಸುವ ದೊಡ್ಡ ಕಟ್ಟೆಗಳಿಂದ ನೀರು ಸರಬರಾಜಾಗುವುದಾದರೆ ಆ ಜಲಾಶಯಗಳು ಸಾಕಷ್ಟು ಶೇಖರಣೆ ಹೊಂದಿರುವುದು ಅವಶ್ಯ. ಅತಿ ಕಡಿಮೆ ಮಳೆ ಬೀಳುವ ವರ್ಷದ ದಾಸ್ತಾನೇ ಇದರ ಕನಿಷ್ಠ ಮಿತಿ. ಒಳ್ಳೆ ಮಳೆಯಾದ ಒಂದು ವರ್ಷದಲ್ಲಿ ಭರ್ತಿ ಆಗುವ ಶೇಖರಣೆ ಇಂಥ ಮೂರು ವರ್ಷಗಳಿಗೆ ಸಾಕಾಗುವಂತಿರಬೇಕು. ಜಲಾನಯನ ಭೂಮಿ ಮತ್ತು ಕಟ್ಟೆಗಳ ಮೇಲ್ಭಾಗಗಳನ್ನು ಚೊಕ್ಕಟವಾಗಿಟ್ಟಿರಬೇಕು. ಮಲಮೂತ್ರಾದಿ ವಿಸರ್ಜನೆಗಳೇ ಆಗಲಿ ಕೈಗಾರಿಕೆಗಳ ವಿಸರ್ಜನೆಗಳೇ ಆಗಲಿ ಕುಡಿಯುವ ನೀರನ್ನು ಕಲುಷಿತಗೊಳಿಸದಂತೆ ಅತಿ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ನೀರು ಹರಿಯುವ ಪಾತ್ರದಲ್ಲಿ ಸಿಕ್ಕಬಹುದಾದ ಆದಷ್ಟು ಹೆಚ್ಚು ನೀರನ್ನು ಒಂದೇ ಕಡೆ ಸೇರಿಸಿ ಹಿಡಿಯುವ ಕ್ರಮ, ಆಗಾಗ್ಗೆ ಬೇರೆ ಬೇರೆ ಜಾಗಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಶೇಖರಿಸುವ ಕ್ರಮಕ್ಕಿಂತ ಒಳ್ಳೆಯದು ಮತ್ತು ಒಟ್ಟಿನಲ್ಲಿ ಕಮ್ಮಿ ವೆಚ್ಚದಲ್ಲಿ ಸಾಧ್ಯ.

ಮೇಲೆ ವಿವರಿಸಿದಂತೆ ನಗರಗಳ ಅಥವಾ ಗ್ರಾಮಸಮುದಾಯಗಳ ಮುಂದಿನ ಐವತ್ತು ವರ್ಷಗಳ ಬೆಳೆವಣಿಗೆಗೆ ಸಾಕಾಗುವ ಯೋಜನೆಗಳನ್ನು ಬೇರೆ ಬೇರೆ ನೀರಿನ ಉತ್ಪತ್ತಿ ಸ್ಥಾನಗಳಿಂದ ತಯಾರಿಸಿ ಸುಲಭಸಾಧ್ಯವಾದದ್ದನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸಾರ್ವಜನಿಕರು ನೀರಿಗೆ ತೆರಬಹುದಾದ ತೆರಿಗೆ ಸಾಧ್ಯವಾದಷ್ಟು ಕಡಿಮೆ ಇರಬೇಕು. ಇಲ್ಲವಾದರೆ ನೀರಿನ ಉಪಯೋಗ ಕಡಿಮೆಯಾಗಿ ಆರೋಗ್ಯಕ್ಕೆ ಹಾನಿಯಾಗಿ ಜೀವನದ ಆಯುಃ ಪರಿಮಾಣ ತಗ್ಗುವುದು. ಹೆಚ್ಚು ಹೆಚ್ಚು ನೀರನ್ನು ಒದಗಿಸಿದಂತೆ ನೀರಿನ ದರ ಕಡಿಮೆ ಕಡಿಮೆ ಆಗುವುದು.

ಪಾಶ್ಚಾತ್ಯ ದೇಶಗಳಲ್ಲಿ ನೀರಿನ ಸರಬರಾಜಿಗೆ ಒದಗಿಸುವ ಹಣದ ಶೇಕಡ 90 ಭಾಗವನ್ನು ಖಾಸಗಿ ಉದ್ಯಮಗಳೇ ಭರಿಸುತ್ತವೆ. ಸರ್ಕಾರ ಏನಿದ್ದರೂ ಸಹಾಯಧನ ನೀಡಬಹುದು ಅಷ್ಟೆ. ಭಾರತದಲ್ಲಿ ಕಲ್ಕತ್ತ, ಮುಂಬಯಿ ನಗರಗಳನ್ನು ಬಿಟ್ಟರೆ ಮಿಕ್ಕ ಎಲ್ಲ ಊರುಗಳಲ್ಲಿಯೂ ಸರ್ಕಾರೀ ವಲಯವೇ ನೀರಿನ ಪೂರೈಕೆ ಮಾಡಬೇಕಾಗಿದೆ.

ಸರಬರಾಜಿನ ಸ್ಥಾವರ : ಸರಬರಾಜಿಗೆ ಬೇಕಾದ ನೀರನ್ನು ಸಂಗ್ರಹಿಸಿ ಪರಿಷ್ಕರಿಸಿ ಪುನಃ ಶೇಖರಿಸಿ ನಗರಕ್ಕೆ ಸರಬರಾಜು ಮಾಡುವ ಎಲ್ಲ ಕಟ್ಟಡ, ಯಂತ್ರ ಮತ್ತು ಸಲಕರಣೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಸಾಮಾನ್ಯವಾಗಿ ಜಲಾಶಯದಲ್ಲಿ 25-30 ಮೀ. ಆಳದಲ್ಲಿ ನೀರು ಸಿಕ್ಕಿ ಜಲಾಶಯದ ಕಣಿವೆಯಲ್ಲೇ ನೀರನ್ನು ಶುದ್ಧೀಕರಿಸುವ ಸಲಕರಣೆಗಳನ್ನು ಸ್ಥಾಪಿಸುವ ಸೌಕರ್ಯವಿದ್ದಲ್ಲಿ ನೀರನ್ನು ಭೂಮಿಯ ಗುರುತ್ವಬಲದಿಂದ ತಿಳಿ ಮಾಡುವ ತೊಟ್ಟಿಗೆ ಪ್ರವಹಿಸಬಹುದು. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಈ ತೆರನಾದ ಏರ್ಪಾಟಿದೆ. ನದಿಯ ನೀರಿನ ಮಟ್ಟದಲ್ಲಿ ಹೆಚ್ಚು ಆಳ ತಗ್ಗಿನ ಪರಿಸ್ಥಿತಿ ಇಲ್ಲದಿದ್ದರೆ ತೇಲುವ ತೂಬುಗಳನ್ನು ಹಾಕಿ ಹಣಿಸುವ ಕೊಳಕ್ಕೆ ಒಯ್ಯುತ್ತಾರೆ. ಶುಭ್ರವಾಗಿರುವ ಬೆಟ್ಟ ಪ್ರದೇಶದಿಂದ ಹರಿದು ಬರುವ ನೀರಿನಲ್ಲಿ ಮಣ್ಣು ಮಿಶ್ರಿತ ಕಶ್ಮಲ ಇರುವುದಿಲ್ಲ. 

ಚಿತ್ರ-1

ಮುಂಬಯಿಯ ಜಲಾಶಯದಲ್ಲಿ ಹೀಗಿದೆ. ಇದಕ್ಕೆ ತಂಗು ತೊಟ್ಟಿ (ಸೆಟ್ಲಿಂಗ್ ಟ್ಯಾಂಕ್) ಬೇಕಾಗಿಲ್ಲ. ಅಲ್ಲದೆ ನೀರಿಗೆ ಪಟಿಕ ಬೆರೆಸಿ ಅದನ್ನು ತಿಳಿ ಮಾಡಬೇಕಾಗಿಯೂ ಇಲ್ಲ. ಇದೇ ರೀತಿ ಕೊಳವೆ ಬಾವಿಯ ನೀರು, ಊಟೆಗಳಿಂದ ಬರುವ ನೀರು, ಸ್ವಚ್ಛ ಮರಳ ಹಾಸಿನ ಮೇಲೆ ಹರಿದು ಬರುವ ನೀರು ಮುಂತಾದ ನೀರನ್ನು ಕೂಡ ವಿವಿಧ ಬಗೆಯ ಶುದ್ಧೀಕರಣಗಳಿಗೆ ಒಳಪಡಿಸುವ ಅವಶ್ಯಕತೆ ಇರುವುದಿಲ್ಲ.

ಜಲಾಶಯದಲ್ಲಿ ಶೇಖರಿಸಿಟ್ಟ ನೀರಿನ ಮೇಲೆ ಸೂರ್ಯರಶ್ಮಿ ಯಥೇಚ್ಛವಾಗಿ ಬೀಳುವುದರಿಂದ ಕ್ರಿಮಿಗಳು ಬಲುಮಟ್ಟಿಗೆ ನಾಶವಾಗುತ್ತದೆ. ಅಲ್ಲದೆ ಅಲ್ಲಿ ನಿಂತ ನೀರು ಶೇಕಡ 80-85 ರವರೆಗೆ ತಂತಾನೇ ತಿಳಿಯಾಗುವುದು. ಆದರೆ ಒಂದಷ್ಟು ಮೊತ್ತ ಆವಿಯಾಗಿ ಪೋಲಾಗುವುದನ್ನು ತಪ್ಪಿಸಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಪಾಚಿ ಕಟ್ಟುವುದೂ ಉಂಟು. ಪಾಚಿ ನಿವಾರಣೆಯ ಕೆಲಸವನ್ನು ಆಗಾಗ್ಯೆ ಕೈಗೊಳ್ಳಬೇಕು. ಹರಿದು ಬರುವ ನದಿನೀರಿನಲ್ಲಿ ಕ್ರಿಮಿಗಳು ಅಧಿಕವಾಗಿರುವುದು ಸಾಮಾನ್ಯ ಕೊಳಕೂ ಹೆಚ್ಚು. ಇಂಥಲ್ಲಿ ಶೋಧಿಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಲಕ್ಷ್ಯ ಹರಿಸಬೇಕು.

ನೀರಿನ ಶುದ್ಧೀಕರಣ : ಸಾರ್ವಜನಿಕ ಉಪಯೋಗಕ್ಕೆ ಒದಗುವ ನೀರು ತಿಳಿಯಾಗಿ ಶುಭ್ರವಾಗಿರಬೇಕು. 270 ಅಗಿಂತ ತಣ್ಣಗೆ ಇರಬೇಕು. ತೇಲಿಬರುವ ಕಶ್ಮಲ ದಶಲಕ್ಷ ಭಾಗಗಳಲ್ಲಿ 10-20 ಕ್ಕಿಂತ ಕಡಿಮೆ ಇರಬೇಕು ; ಎಂದೂ 30 ಆಗಕೂಡದು. ಬಣ್ಣ 10 ಡಿಗ್ರಿಗಿಂತ ಕಮ್ಮಿ ಇರಬೇಕು. ರುಚಿಯಾಗಿರಬೇಕು. ನೀರಿನಲ್ಲಿ ತೇಲುವ ಮತ್ತು ವಿಲೀನವಾಗಿರುವ ಘನ ಪದಾರ್ಥಗಳು ದಶಲಕ್ಷ ಭಾಗಗಳಲ್ಲಿ 1,000ಕ್ಕಿಂತ ಕಡಿಮೆ ಇರಬೇಕು. ಉಪ್ಪು ಮೊದಲಾದ ಕ್ಲೋರೈಡುಗಳು ದಶಲಕ್ಷ ಭಾಗಗಳಲ್ಲಿ 200-250ಕ್ಕಿಂತ ಕಡಿಮೆ ಇರಬೇಕು. ಸಾರಜನಕ ಸಂಯುಕ್ತಗಳು ಮತ್ತು ಅಮೋನಿಯ ದಶಲಕ್ಷ ಭಾಗಗಳಲ್ಲಿ 20ಕ್ಕಿಂತಲೂ ಪ್ರಾಣಿ ಮತ್ತು ಮಾನವ ವಿಸರ್ಜನೆಯಿಂದ ಸೇರುವ ಅಮೋನಿಯ 30ಕ್ಕಿಂತಲೂ ಕಡಿಮೆ ಇರಬೇಕು. ನೀರನ್ನು ಗಡಸು ಅಥವಾ ಮೃದುವಾಗಿ ಮಾಡುವ ಕಾರ್ಬೊನೇಟುಗಳು ಮತ್ತು ಸಲ್ಫೇಟುಗಳು ದಶಲಕ್ಷ ಭಾಗಗಳಲ್ಲಿ 100ಕ್ಕಿಂತ ಹೆಚ್ಚಾದರೆ ಆ ನೀರನ್ನು ಗಡಸು ಎಂದೂ 50ಕ್ಕೆ ಕಮ್ಮಿ ಇದ್ದರೆ ಮೃದುವೆಂದೂ ಹೇಳಲಾಗುವುದು. ಬಟ್ಟೆ ಉದ್ಯಮಕ್ಕೆ ನೀರು ಮೃದುವಾಗಿರಬೇಕು. ಎಷ್ಟೋ ಊರುಗಳಲ್ಲಿ 150ರವರೆಗೂ ಇರುವ ನೀರನ್ನು ಕುಡಿಯಲು ಬಳಸುವರು. ಬಹಳ ಗಡಸಾಗಿರುವ ನೀರನ್ನು ಉಪಯೋಗಿಸಿದರೆ ಕರುಳು ಮತ್ತು ಮೂತ್ರಜನಕಾಂಗ ಸಂಬಂಧವಾದ ಬೇನೆಗಳು ಬರುವುವು. ಕಬ್ಬಿಣ, ಸೀಸ, ಮೆಗ್ನೀಷಿಯಮ್, ಮ್ಯಾಂಗನೀಸ್, ಫ್ಲೂರೀನ್, ತಾಮ್ರ, ಸತು, ಗಂಧಕ ಇವು ಅತ್ಯಲ್ಪ ಮೊತ್ತದಲ್ಲಿ ಇರಬಹುದು.

ಮನೆಗಳಲ್ಲಿ ಬಳಸುವ ನೀರಿನಲ್ಲಿ ಅಂಡಜಾದಿ ಕ್ರಿಮಿಕೀಟಗಳಿರಬಾರದು. ಅದು ಆದಷ್ಟು ಮಟ್ಟಿಗೆ ಪರಿಶುದ್ಧವಾಗಿರಬೇಕು. ಅದರಲ್ಲೂ ಉದರಸಂಬಂಧ ಖಾಯಿಲೆ ಉಂಟುಮಾಡುವ ಜೀವಾಣುಗಳ ಅಂಡ 100 ಘನಸೆಂಟಿಮೀಟರುಗಳಲ್ಲಿ 1 ಕೂಡ ಇರಬಾರದು. ನೀರಿನ ನೈಜ ಸ್ಥಿತಿಯಲ್ಲಿ 1 ಘನ ಸೆಂಟಿಮೀಟರಿನಲ್ಲಿ 50-100 ಅಂಡಗಳು ಇರಬಹುದು. ಆದರೆ ನೀರನ್ನು ಕೊನೆಯದಾಗಿ ಸದಾಕಾಲ ಶುದ್ಧೀಕರಿಸಿ ಮೇಲೆ ಹೇಳಿದ ಉನ್ನತ ದರ್ಜೆಗೆ ತಂದು ತದನಂತರವೇ ಉಪಯೋಗಕ್ಕೆ ರವಾನಿಸಬೇಕು. ಇದಕ್ಕಾಗಿ ಬಿ ಕೋಲಿ ಸೂಚಕ ಎಂಬ ಪರೀಕ್ಷೆಯನ್ನು ರೂಪಿಸಲಾಗಿದೆ. ಇದು ಪರಿಷ್ಕರಣ ಕಾರ್ಯಕ್ರಮದಲ್ಲಿ ಮುಖ್ಯ ಹೆಜ್ಜೆ. ನೀರು ತಿಳಿಯಾಗಿದ್ದರೂ ಈ ವಿಧವಾದ ಶುದ್ಧೀಕರಣ ಅತ್ಯವಶ್ಯ.

ನೀರಿನಿಂದ ಕ್ರಿಮಿ ನಿರ್ಮೂಲನ ಮಾಡುವ ಕ್ರಮ : ನಗರಕ್ಕೆ ಬೇಕಾಗುವ ಹೆಚ್ಚಾದ ನೀರನ್ನು ಸುಲಭ ರೀತಿಯಲ್ಲಿ ಕ್ರಿಮಿಕೀಟರಹಿತವಾಗಿ ಮಾಡುವುದಕ್ಕೆ ಕ್ಲೋರೀನ್ ಅನಿಲವೇ ಶ್ರೇಷ್ಠವಾದದ್ದು. ಕಿರು ನೀರು ಸರಬರಾಜು ವ್ಯವಸ್ಥೆಯಲ್ಲಿ ಚಲುವೆ ಪುಡಿ ಅಥವಾ ಪರ್‍ಕ್ಲೋರಾನ್ ಪೌಡರನ್ನು ಉಪಯೋಗಿಸುತ್ತಾರೆ. ಈ ಏರ್ಪಾಡಿನಲ್ಲಿ ಕ್ಲೋರೀನ್ ನೀರಿನೊಡನೆ ಬೆರೆತು ಆಕ್ಸಿಜನ್ನನ್ನು ಸ್ವಚ್ಛ ಸ್ಥಿತಿಯಲ್ಲಿ ಬಿಡುಗಡೆ ಮಾಡುವುದು. ಇದಕ್ಕೆ ಅಧಿಕ ಕ್ರಿಮಿನಾಶಕ ಸಾಮಥ್ರ್ಯವಿದೆ. 15.15 ಲಕ್ಷ ಲೀಟರ್ ನೀರಿನಲ್ಲಿ 0.1 ಅಂಶ ನೀರಿನ ಸರಬರಾಜಿನ ಅಂತ್ಯ ಭಾಗಗಳಿಗೂ ಸೇರುವಷ್ಟು ದಕ್ಷತೆ ಇಟ್ಟರೆ ಕ್ಷೇಮ. 100 ಘನ ಸೆಂಟಿಮೀಟರ್ ನೀರಿನಲ್ಲಿ 1-2 ಅಂಡಗಳಿಗಿಂತ ಜಾಸ್ತಿ ಇರಬಾರದು. ಈ ದಕ್ಷತೆ ಬರುವುದಕ್ಕೆ ಸ್ಥಾವರದ ಮೊದಲನೆಯ ಹಂತದಲ್ಲಿ ಕ್ಲೋರೀನ್ ಅನಿಲವನ್ನು ಹೆಚ್ಚಾಗಿ ಬಿಡಬೇಕು. ಅಲ್ಲದೆ ನಗರದ ನಾನಾ ಪ್ರದೇಶಗಳಲ್ಲಿ ಪುನಃ ಒಂದು ಬಾರಿ ಸೇರಿಸುವ ಏರ್ಪಾಡಿದ್ದರೆ ಇನ್ನೂ ಉತ್ತಮ. 

ಚಿತ್ರ-2

ನೀರಿನ ಹಂಚಿಕೆಯ ಕ್ರಮ : ನೀರಿನ ಸರಬರಾಜಿನಲ್ಲಿ ನೀರಿನ ಹಂಚಿಕೆಯ ಪದ್ಧತಿಯೇ ಕ್ಲಿಷ್ಟವಾದ ಸಮಸ್ಯೆ. ಹಣ ಹೂಡಿಕೆಯ ದೃಷ್ಟಿಯಿಂದ ಕೂಡ ಹಂಚಿಕೆಯ ವ್ಯವಸ್ಥೆಯೇ ಶೇಕಡ 60-65 ಭಾಗವನ್ನು ಆಕ್ರಮಿಸುತ್ತದೆ. ನಗರ ಹೇಗೆ ಬೆಳೆಯುವುದೋ ಹಾಗೆ ನೀರಿನ ಹಂಚಿಕೆಯೂ ಬೆಳೆಯುವುದು. ಸಲಕರಣೆಗಳ ಬೆಲೆ ಮತ್ತು ಅವು ಸಿಗುವ ಅಭಾವ ಮತ್ತು ಆಗಾಗ್ಗೆ ಪದ್ಧತಿಯನ್ನು ಬದಲಾವಣೆ ಮಾಡುವ ಕಷ್ಟಸಾಹಸ ಇವೇ ಮೊದಲಾದ ಕಾರಣಗಳಿಂದ ಒಂದು ಬಾರಿ ವ್ಯವಸ್ಥಿತವಾದ ಹಂಚಿಕೆಯ ಪದ್ಧತಿ ನಗರದ 40-50 ವರ್ಷಗಳ ಬೆಳೆವಣಿಗೆಗೆ ಸಾಕಾಗುವಷ್ಟು ಗಾತ್ರದ್ದಾಗಿದ್ದರೆ ಒಳ್ಳೆಯದು. ಹೀಗಲ್ಲದಿದ್ದರೆ ಹಂಚಿಕೆ ಶೀಘ್ರದಲ್ಲೇ ಸದಾ ಕಾಲ ನೀರು ಸಿಗುವ ಅವಿಚ್ಛಿನ್ನ ಪದ್ಧತಿಯನ್ನು ಬಿಟ್ಟು ಕೆಲವು ಗಂಟೆಗಳು ಮಾತ್ರ ನೀರು ಸಿಗುವ ಅಥವಾ ಯಾವ ಪದ್ಧತಿಯೂ ಇಲ್ಲದ ಅಕ್ರಮಸ್ಥಿತಿಯ ಪರಿಣಾಮಕ್ಕೆ ಇಳಿಯುತ್ತದೆ. ನಿಂತು ನಡೆಯುವ ಇಂಥ ಪದ್ಧತಿಯಲ್ಲಿ ಕೊಳಾಯಿಗಳಲ್ಲಿ ನೀರು ಖಾಲಿ ಆದಾಗ ಭೂಮಿ ಸಂಪರ್ಕದಿಂದ ಒದಗುವ ದೋಷಗಳು ಅವುಗಳ ಒಳಹೊಕ್ಕು ಅನಂತರ ನೀರಿನ ಗುಣವನ್ನು ಕೆಡಿಸಲು ವಿಫುಲ ಅವಕಾಶ ಉಂಟು. ಮನೆಗಳಲ್ಲೂ ನೀರನ್ನು ಶೇಖರಿಸಿಡುವ ತೊಟ್ಟಿ ಹಾಗೂ ಪಾತ್ರೆಗಳು ಪರಿಶುದ್ಧವಾಗಿರದಿದ್ದರೆ ನೀರು ಕೆಡಬಹುದು.
 	ನೀರನ್ನು ಹಂಚುವ ಮುಖ್ಯವಾದ ವಿಧಗಳು: 1. ಮರದ ಕೊಂಬೆಗಳಂತೆ ಇರುವ ವ್ಯವಸ್ಥೆ : ಮುಖ್ಯ ನಾಳವೊಂದರಿಂದ ಹಲವು ರೆಂಬೆಗಳಂತೆ ಉಪನಾಳಗಳನ್ನು ಹರಿಸಿ ಅವುಗಳಿಂದ ಮನೆಗಳ ಸರಬರಾಜಿಗೆ ಹಾಕುವ ಸಣ್ಣ 75-100ಮಿಮಿ ಪೈಪುಗಳು. ಚೆನ್ನಾಗಿ ಬೆಳೆಯದೆ ಇರುವ ಸಣ್ಣ ಪಟ್ಟಣಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಇದರಲ್ಲಿ ನೀರು ಕೊನೆ ಪೈಪುಗಳಲ್ಲಿ ಹಾಗೆ ತಂಗಿ ನಿಂತು ಕೆಡುವುದುಂಟು. ಹೀಗಾಗಿ ಪದೇ ಪದೇ ನೀರನ್ನು ಚರಂಡಿಗೆ ಹಾಯಿಸಿ ಪರಿಶುದ್ಧವಾಗಿಟ್ಟುಕೊಳ್ಳಬೇಕು. ಪೈಪು ಹಾದಿಯನ್ನು ದುರಸ್ತು ಮಾಡುವಾಗ ಜನರಿಗೆ ತೊಂದರೆ ಜಾಸ್ತಿ.

ಚಿತ್ರ-3

2. ಜರಡೆಯ ಹಂಚಿನಂತೆ ಇರುವ ವ್ಯವಸ್ಥೆ (ಗ್ರಿಡ್ ಐರನ್ ಸಿಸ್ಟಮ್) : ಸಾಮಾನ್ಯವಾಗಿ ಸುವ್ಯವಸ್ಥಿತವಾಗಿರುವ ಚೌಕಟ್ಟಿನ ರಸ್ತೆಗಳಲ್ಲಿ ಈ ಪದ್ಧತಿ ಉತ್ತಮ. ಮುಖ್ಯ ನಾಳದಿಂದ ಐದಾರು ಶಾಖೆಗಳನ್ನು ಹಾಕಿ ಅಲ್ಲಿಂದ ಉಪನಾಳಗಳನ್ನೂ ಮನೆಗೆ ಸರಬರಾಜಿನ ಪೈಪುಗಳನ್ನೂ ಹಾಕಿ ಕೊನೆಗಳನ್ನೆಲ್ಲ ಯಾವಾಗಲೂ ನೀರು ಹರಿಯುವಂತೆ ಸೇರಿಸಿರುತ್ತಾರೆ. ದೊಡ್ಡದಾದ ನೀರಿನ ತೊಟ್ಟಿಗಳಿಂದ ನಗರದ ಬೇರೆ ಬೇರೆ ಬಡಾವಣೆಗಳಿಗೆ ಮೂರು ನಾಲ್ಕು ಮುಖ್ಯ ನಾಳಗಳನ್ನು ಹರಿಸಿ ಒಂದೊಂದಕ್ಕೂ ಒಂದು ಚೌಕಟ್ಟಿನ ಪದ್ಧತಿಯನ್ನು ಏರ್ಪಡಿಸಬಹುದು ಚಿತ್ರದಲ್ಲಿ ಒಂದು ಮುಖ್ಯನಾಳದಿಂದ ಮತ್ತೊಂದಕ್ಕೆ ನಾಳಗಳನ್ನು ಹಾಕಬಹುದು. ನೀರಿನ ತೊಟ್ಟಿಗಳನ್ನು ಕೂಡ ನಗರದ ಮೂರು ನಾಲ್ಕು ಸ್ಥಳಗಳಲ್ಲಿ ಬೇರೆಬೇರೆಯಾಗಿ ಸ್ಥಾಪಿಸಿ ಈ ವ್ಯವಸ್ಥೆಯನ್ನು ಮತ್ತೂ ಹರಡಬಹುದು. ಬೆಂಗಳೂರು ನಗರದಲ್ಲಿ ಸ್ವಲ್ಪಮಟ್ಟಿಗೆ ಈ ಪದ್ಧತಿ ಜಾರಿಯಲ್ಲಿದೆ.

3. ಉಂಗುರದ ವ್ಯವಸ್ಥೆ : ಇದೂ ಎರಡನೆಯ ವ್ಯವಸ್ಥೆಯಂತೆಯೇ. ಆದರೆ ವ್ಯವಸ್ಥೆಯ ಸುತ್ತಲೂ ಮುಖ್ಯನಾಳದಿಂದ ದೊಡ್ಡ ಕೊಳಾಯಿಗಳನ್ನು ಹಾಕಿ ಒಳಗಡೆಗೆ ಉಪನಾಳಗಳನ್ನೂ ಸರಬರಾಜಿನ ಪೈಪುಗಳನ್ನೂ ಹಾಕುತ್ತಾರೆ. 

4. ಅರೀಯ ವ್ಯವಸ್ಥೆ (ರೇಡಿಯಲ್ ಸಿಸ್ಟಮ್) : ನಗರಪ್ರದೇಶವನ್ನು ಕೇಂದ್ರದಿಂದ ಹೊರಸಾಗುವ ತ್ರಿಜ್ಯಗಳಿಂದ ವಲಯಗಳಾಗಿ ವಿಭಾಗಿಸಿ ಅಲ್ಲಲ್ಲಿ ನೀರಿನ ಮೇಲ್ತೊಟ್ಟಿಗಳನ್ನಿಟ್ಟು ಅವುಗಳ ಮೂಲಕ ಉಪನಾಳಗಳನ್ನು ನಾನಾ ಕಡೆಗೆ ಹಾಕಿ ಅಲ್ಲಿಂದ ಸರಬರಾಜಿನ ಪೈಪುಗಳಿಂದ ಮನೆಗಳಿಗೆ ನೀರನ್ನು ಒದಗಿಸುವ ಏರ್ಪಾಡು ಚಿತ್ರದಲಿ.್ಲ ಒಂದೊಂದು ವಲಯಕ್ಕೂ ಮುಖ್ಯನಾಳವನ್ನು ನೀರಿನ ತೊಟ್ಟಿಯಿಂದ ಇಲ್ಲದಿದ್ದರೆ ರೇಚಿಸಿ ಉಪನಾಳಗಳನ್ನು ತೊಟ್ಟಿಗಳಿಗೆ ಹಾಕಬೇಕು. ಮತ್ತು ಅವುಗಳ ಮುಖಾಂತರವೇ ಸರಬರಾಜು ಮಾಡಬೇಕು. ಸುಮಾರು 15,000 ಜನಕ್ಕೆ ಒಂದು ವಲಯ ಎಂದಿಟ್ಟುಕೊಳ್ಳಬಹುದು.

ಚಿತ್ರ-4

 	ನೀರಿನ ಹಂಚಿಕೆ ಸುಗಮವಾಗಿ ಇರುವಂತೆ ಮಾಡಲು ಮತ್ತು ಕಾಲಾನುಕಾಲಕ್ಕೆ ಅದು ಹೊಂದಿಕೊಂಡು ಬೆಳೆಯುವಂತೆ ಮಾಡಲು ಈ ಕೆಳಗೆ ಹೇಳಲಾಗುವ ಅಂಶಗಳನ್ನು ಗಮನಿಸಬೇಕು:

1. ನಗರದ ಮಟ್ಟವನ್ನು ತಿಳಿಸುವ ನಕ್ಷೆಗಳನ್ನು (1.5 ಮೀ ವ್ಯತ್ಯಾಸವೂ ತಿಳಿಯುವಂತೆ) ತಯಾರಿಸಿ ಪ್ರತಿಯೊಂದು ನೀರಿನ ಕಟ್ಟೆ ಪೈಪುಗಳು, ವಾಲ್ವ್‍ಗಳು, ವಲಯಗಳು ಅವುಗಳಲ್ಲಿ ನಮೂದಿಸಿರಬೇಕು. ಒಂದೊಂದು ವಲಯಕ್ಕೂ ಒಂದೊಂದು ಭೂಪಟ ಇರಬೇಕು.

2. ತೊಟ್ಟಿ, ಪೈಪು ಮೊದಲಾದ ಉಪಕರಣಗಳ ದಾಖಲೆ ಪುಸ್ತಕಗಳನ್ನು ಇಟ್ಟಿರಬೇಕು. ಇದರಿಂದ ಇವುಗಳ ಕಾಲಾನುಕಾಲ ದುರಸ್ತಿ ಬದಲಾವಣೆ ಮೊದಲಾದ ವಿವರಗಳಿಗೆ ಕ್ರಮಬದ್ಧವಾಗಿ ಗಮನ ಹರಿಸುವುದು ಸಾಧ್ಯವಾಗುವುದು.

3. ಜಲಾಶಯಗಳನ್ನು ನಿರ್ಮಿಸಿ ಅವುಗಳ ಪೂರ್ಣ ಮಾಹಿತಿಗಳನ್ನು ನೀಡುವ ದಾಖಲೆ ಪತ್ರಗಳನ್ನು ಇಡಬೇಕು.

4. ಪ್ರತಿವರ್ಷವೂ ನೀರಿನ ಹಂಚಿಕೆಯ ಪೈಪುಗಳಲ್ಲಿ ನೀರಿನ ಒತ್ತಡವನ್ನು ಒತ್ತಡದ ಗೇಜುಗಳ ಮೂಲಕ ನೋಡಿ ಯಾವಾಗ ಪೈಪುಗಳನ್ನು ಬದಲಾವಣೆ ಮಾಡಬೇಕೆಂಬುದನ್ನು ಪುಸ್ತಕಗಳಲ್ಲಿ ಬರೆದಿಡಬೇಕು.

5. ಹಂಚಿಕೆಯ ಪದ್ಧತಿಯಲ್ಲಿ 7.5ಮಿಮೀಗಿಂತ ಕಿರಿದಾದ ಪೈಪುಗಳನ್ನು ಹಾಕಬಾರದು. ಕಬ್ಬಿಣದ ತಾಂಡವಾಳದ ಪೈಪುಗಳನ್ನು ಆಗಾಗ್ಗೆ ಕೊಳಕನ್ನು ತೆಗೆದು 80-90 ವರ್ಷ ಸರಬರಾಜಿನಲ್ಲಿ ಇಡಬಹುದು. ಉಕ್ಕಿನ ಪೈಪು 25-30 ವರ್ಷಕ್ಕೆ ಮೇಲೆ ಬಾಳುವುದಿಲ್ಲ. ತುಕ್ಕು ಹಿಡಿದು ತೂತಾಗಿ ಹೋಗುತ್ತವೆ.

6. ಪ್ರತಿದಿವಸವೂ 15-20 ನೀರಿನ ಮಾದರಿಗಳನ್ನು ನಗರದ ಬೇರೆ ಬೇರೆ ಸ್ಥಳಗಳಿಂದ ಸಂಗ್ರಹಿಸಿ ಪರೀಕ್ಷೆ ಮಾಡಿಸಿ ನೀರು ಕೆಟ್ಟಿದ್ದರೆ ಕ್ಲೋರೀನ್ ಅನಿಲವನ್ನು ಸರಿಯಾಗಿ ಹಾಕಿ ನೀರಿನ ಗುಣಮಟ್ಟವನ್ನು ಸದಾ ಕಾಲವೂ ಕಾಪಾಡಿಕೊಂಡು ಬರಬೇಕು. ಇದಕ್ಕೂ ದಾಖಲೆಗಳನ್ನು ಇಡಬೇಕು.

7. ಸಾರ್ವಜನಿಕ ನಲ್ಲಿಗಳನ್ನು ಸಾಧ್ಯವಾದ ಮಟ್ಟಿಗೆ ಕಡಿಮೆಮಾಡಿ ಪ್ರತಿ ಮನೆಗೂ ನೀರಿನ ನಲ್ಲಿಗಳನ್ನು ಕೊಡುವುದು ಉತ್ತಮ ಮಾರ್ಗ. ಈ ಸಾರ್ವಜನಿಕ ನಲ್ಲಿಗಳ ಹತ್ತಿರ ಕೊಳಕು ಸೇರದಂತೆ ನೋಡಿಕೊಳ್ಳಬೇಕು. ಚೆಲುವೆಪುಡಿಯನ್ನು ಹೇರಳವಾಗಿ ಉಪಯೋಗಿಸಿ ನೀರಿನ ಶುದ್ಧತೆಯನ್ನು ಕಾಪಾಡಬೇಕು.

8. ಪೈಪುಗಳನ್ನು ಬಚ್ಚಲು ಅಥವಾ ಕಕ್ಕಸುಗಳ ಸಂಪರ್ಕವಾಗದಂತೆ ಸರಿಯಾದ ಎಡೆಗಳಲ್ಲೇ ಹಾಕಬೇಕು. ಕಾಲುದಾರಿಗಳಲ್ಲಿ ಅಲಾಯಿದ ದಾರಿ ಗುರುತಿಸಿ ಅದರಲ್ಲಿ ಪೈಪು ಹಾಕುವುದು ಒಳ್ಳೆಯದು. ರಸ್ತೆಯ ಮಧ್ಯದಲ್ಲಿ ಹಾಕಬಾರದು.

9. ಮನೆಗಳ ನಲ್ಲಿಗಳ ದಾSಲೆಗಳನ್ನು ಸಹ ಇಡಬೇಕು. ಮನೆಗಳ ಮಾಪಕಗಳ ಚರಿತ್ರೆಯನ್ನು ಪ್ರತಿ ತಿಂಗಳು ಬರೆದಿಡಬೇಕು.

10 ಒಟ್ಟು ನೀರಿನ ಅಳತೆ. ಒಂದೊಂದು ವಲಯ ಅಥವಾ ವಲಯಕ್ಕೆ ತೊಟ್ಟಿ ನೀರಿನ ಅಳತೆ, ಸಾರ್ವಜನಿಕ ನಲ್ಲಿಗಳ ನೀರಿನ ಅಳತೆ. ಕೈಗಾರಿಕೆಗೆ ಕೊಡುವ ನೀರಿನ ಅಳತೆ ಹೀಗೆ ಎಲ್ಲ ವಿಧವಾಗಿ ನೀರು ಉಪಯೋಗಿಸಲ್ಪಡುವ ಮಾಹಿತಿ ಪ್ರತಿ ವರ್ಷವೂ ದೊರಕುವಂತೆ ಇರಬೇಕು. ಹೀಗೆಯೆ ಸರಬರಾಜಿನ ಕಾರ್ಯಕ್ರಮದ ಸಿಬ್ಬಂದಿಗಳ ಲೆಕ್ಕ ಇಡಬೇಕು. ಸಾಧ್ಯವಾದ ಮಟ್ಟಿಗೆ ಜನಸಂಖ್ಯೆಯನ್ನು ವರ್ಷೇ ವರ್ಷೇ ಗೊತ್ತುಮಾಡಿ ನೀರನ್ನು ಎಷ್ಟರ ಮಟ್ಟಿಗೆ ಕೊಡುತ್ತಿದ್ದಾರೆ ಎಂಬುದನ್ನು ಶ್ರುತಪಡಿಸಬೇಕು.

11. ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ಮುಂತಾದವುಗಳಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳುವ ಏರ್ಪಾಡಿರಬೇಕು. 

12. ತೊಟ್ಟಿಗಳು, ದೊಡ್ಡ ನಾಳಗಳು ಮುಂತಾದವನ್ನು ಆಗಾಗ್ಗೆ ಹೆಚ್ಚಿನ ಕ್ಲೋರಿನ್‍ಲ್ಲಿ ಹಾಕಿ ಶುದ್ಧ ಮಾಡಿರುವ ಕ್ರಮವನ್ನು ಅನುಸರಿಸುತ್ತ ಬರಬೇಕು.

13. ನೀರಿನ ತೊಟ್ಟಿಗಳಲ್ಲಿ ಎರಡು ದಿವಸಗಳ ಶೇಖರಣೆ ಮತ್ತು ವಲಯದ ತೊಟ್ಟಿಗಳಲ್ಲಿ 15-18 ಗಂಟೆಗಳ ಸರಬರಾಜು ಆಗುವ ಶೇಖರಣೆಗೆ ಇರುವಂತೆ ನೋಡಿಕೊಳ್ಳಬೇಕು. ಕಾಲಾನು ಕಾಲಕ್ಕೆ ಇವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

14. ಎಲ್ಲೂ ನೀರು ಪೋಲಾಗದಂತೆ ಶಿಸ್ತಿನ ಕಾರ್ಯಕ್ರಮ ಇರಬೇಕು. ಸಾಧಾರಣವಾಗಿ ಶೇಕಡ 10ರಿಂದ 25ರ ವರೆಗೆ ನೀರು ಸೋರಿ ಹೋಗುವುದು. ಇದನ್ನು ಶೇಕಡ 10ಕ್ಕೆ ಮಿತಿಗೊಳಿಸಬೇಕು.

15. ನಗರದ ಸರಬರಾಜು ಪದ್ಧತಿಯಲ್ಲಿ ದುರಸ್ತಿಗಳನ್ನು 8-10 ಗಂಟೆಗಳ ಒಳಗೆ ಮಾಡುವುದಕ್ಕೆ ಸಹಕಾರಿಯಾಗುವಂತೆ ಸಲಕರಣೆಗಳನ್ನು ಪೈಪುಗಳು, ಶಾಖೆಗಳು, ವಾಲ್ವುಗಳು ಮುಂತಾದ ಸಾಮಾನುಗಳನ್ನು ಶೇಖರಿಸಿ ಸದಾಕಾಲ ದೊರಕುವಂತೆ ಏರ್ಪಾಟು ಮಾಡಬೇಕು.

16. ಸರಬರಾಜು ಪದ್ದತಿಯನ್ನು ಪ್ರತೀ ವರ್ಷವೂ ನಡೆಸಿಕೊಂಡು ಬರುವುದಕ್ಕೆ ಆಯವ್ಯಯಗಳ ಲೆಕ್ಕ ಇಡಬೇಕು. ನೀರಿನ ಕಂದಾಯ, ನೀರಿನ ವಲಯ ದರ, ಮಾಪಕಗಳಿಂದ ಬರುವ ಮೊಬಲಗು, ಕೈಗಾರಿಕೆಗಳಿಂದ ಬರುವ ಮೊಬಲಗು ಹೀಗೆ ಎಲ್ಲ ವಿಧಗಳಲ್ಲೂ ಬರಬಹುದಾದ ಆದಾಯ ಮತ್ತು ಖರ್ಚಿನ ವಿವರಗಳು ಸಾರ್ವಜನಿಕರಿಗೆ ತಿಳಿಯುವಂತೆ ಪ್ರಚಾರವೂ ಆಗಬೇಕು. ನೀರಿನ ಗುಣವನ್ನು ಕಾಪಾಡುವುದರಿಂದ ಆರೋಗ್ಯ ಹೆಚ್ಚುವ ವಿಷಯವೂ ಪ್ರಚಾರವಾಗಬೇಕು.

17. ಒಟ್ಟಿನಲ್ಲಿ ಸರಬರಾಜು ಪದ್ದತಿಗೆ ಅತ್ಯಂತ ಉತ್ಕøಷ್ಟವಾದ ಸಾಮಗ್ರಿಗಳನ್ನೂ, ಯಂತ್ರಗಳನ್ನೂ ಉಪಯೋಗಿಸಿ ಹೆಚ್ಚಿನ ದಕ್ಷತೆಯನ್ನು ಕಾಪಾಡಿಕೊಂಡು ಬಂದರೆ ಖರ್ಚು ಕಡಿಮೆಯಾಗಿ ಆದಾಯವನ್ನು ಸರಿತೂಗಿಸಿ ಆರೋಗ್ಯವನ್ನು ಕಾಪಾಡಬಹುದು.

18. ಸಾರ್ವಜನಿಕ ನೀರಿನ ಸರಬರಾಜಿನಲ್ಲಿ ಶುದ್ಧತೆಯನ್ನು ಕಾಪಾಡಲು ಸಂತತÀ ಜಾಗರೂಕತೆಯೊಂದೇ ಖಾತ್ರಿ ಮದ್ದು. ನೀರಿನ ಸರಬರಾಜು ಸಾಕಾಗÀದೇ ಇರುವುದಕ್ಕೆ ತಾಮಸವೇ ಮುಖ್ಯವಾದ ಕಾರಣ.

 	ಸಾರ್ವಜನಿಕ ನೀರಿನ ಸರಬರಾಜಿನ ಅಂತಸ್ತನ್ನೂ ಅದರ ಪಾರಿಶುಧ್ದ್ಯವನ್ನೂ ಕಾಪಾಡಬೇಕಾದರೆ ಸದಾಕಾಲದ ಎಚ್ಚರಿಕೆಯೇ ಸರಿಯಾದ ಹಾದಿ.

 	ಜಲಮಾಪಕ : ಸಾರ್ವಜನಿಕ ನೀರು ಸರಬರಾಜಿನ ವ್ಯವಸ್ಥೆಯ ದಕ್ಷತೆಯನ್ನು ಅಳತೆ ಮಾಡುವುದಕ್ಕೆ ಮತ್ತು ಅದನ್ನು ಕ್ಷೀಣವಾಗದಂತೆ ಕಾಪಾಡಿಕೊಂಡು ಬರಬೇಕಾದರೆ ನೀರನ್ನು ಎಲ್ಲ ಸ್ಥಾನಗಳಲ್ಲೂ ಅಳತೆ ಮಾಡುವುದು ಅತ್ಯವಶ್ಯ. ನೀರನ್ನು ಒದಗಿಸಲು ವಿದ್ಯುತ್ ಮೊದಲಾದ ಶಕ್ತಿಗಳಿದ್ದರೆ ಅವನ್ನು ಮಾಪಕ ಯಂತ್ರದಿಂದ ಅಳತೆ ಮಾಡಬೇಕು. ನೀರು ಹರಿಯುವುದನ್ನು ಅಳತೆ ಮಾಡಲು ಜಲಮಾಪಕ ಇಡಬೇಕು. ನೀರಿನ ಕಾರ್ಯಾಲಯದಲ್ಲಿ ಇವುಗಳ ಮುಖಾಂತರ ಅದರ ದಕ್ಷತೆಯನ್ನು ಕಂಡುಹಿಡಿಯಬಹುದು. ನಗರ ಸರಬರಾಜಿನ ದಕ್ಷತೆಯನ್ನು ನೋಡುವುದಕ್ಕೆ ಮುಖ್ಯ ನಾಳಗಳು ನೀರಿನ ತೊಟ್ಟಿಗಳಿಗೆ ಬರುವ ಮುಂದೆ ವೆಂಚ್ಯೂರಿ ಮಾಪಕಗಳನ್ನು ಅಳವಡಿಸಿ ಒಟ್ಟಿನ ನೀರನ್ನು ಅಳತೆ ಮಾಡಬೇಕು. ಮಾಪಕಗಳನ್ನು ಆಯಾ ವಲಯಗಳಿಗೆ ಹಾಕಿ ಅಲ್ಲಲ್ಲಿ ಖರ್ಚಾಗುವ ನೀರನ್ನು ಅಳತೆ ಮಾಡಬೇಕು. ಮನೆಮನೆಗೂ ಒದಗುವ ನೀರನ್ನು ಅಳತೆ ಮಾಡಲು ಮಾಪಕಗಳನ್ನು ಹಾಕಬೇಕು. ನೀರು ಸಿಗುವುದು ಪ್ರಯಾಸವಾಗಿದ್ದು ಹೆಚ್ಚಿನ ಬೆಲೆಯಿರುವ ನೀರಿನ ಹಂಚಿಕೆಯನ್ನು ಎಲ್ಲ ಮನೆಗಳಿಗೂ ಮಾಪಕ ಯಂತ್ರಗಳ ಮೂಲಕ ಮಾಡುವುದು ಉತ್ತಮ.  (ಸಿ.ಎನ್.ಎಸ್.ಆರ್.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ